ಧ್ಯಾನ್‍ಚಂದ್
1905 - 1979. ಹಾಕಿಯ ಜಾದುಗಾರ, ಹಾಕಿಯ ರಾಜ, ಎಂದು ಖ್ಯಾತರಾದ ಭಾರತೀಯ ಕ್ರೀಡಾಪಟು. ಭಾರತದ ಹಾಕಿ ಆಟದಲ್ಲಿ ಏನಾದರೂ ಉತ್ತಮ ಗುಣವಿದ್ದರೆ ಅದು ಧ್ಯಾನ್‍ಚಂದರಲ್ಲಿದೆ- ಹೀಗೆ ವಿದೇಶದ ಪ್ರಖ್ಯಾತ ಹಾಕಿ ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ.

ಧ್ಯಾನ್‍ಚಂದ್ ಹುಟ್ಟಿದ್ದು ಪ್ರಯಾಗದಲ್ಲಿ ವಾಸವಾಗಿದ್ದ ಒಂದು ಸಾಮಾನ್ಯ ರಜಪೂತ ಕುಟುಂಬದಲ್ಲಿ, 1905ರಲ್ಲಿ ಆಗಸ್ಟ್ 29ರಂದು. ತಂದೆ ಸೈನಿಕರಾಗಿದ್ದರು. ಮಗನಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಬಯಕೆ ಇದ್ದರೂ ಆರ್ಥಿಕ ಕಾರಣಗಳಿಂದಾಗಿ ಅವರಿಗದು ಸಾಧ್ಯವಾಗಲಿಲ್ಲ. ಹೀಗಾಗಿ ಧ್ಯಾನ್‍ಚಂದ್ ಓದನ್ನು ಅರ್ಧದಲ್ಲಿಯೇ ಬಿಟ್ಟು ಸೈನ್ಯಕ್ಕೆ ಸೇರಬೇಕಾಯಿತು. ಅಲ್ಲಿ ಇವರಿಗೆ ಹಾಕಿಯಲ್ಲಿ ಪ್ರಥಮ ಪಾಠ ನೀಡಿದವರು ಅದೇ ರೆಜಿಮೆಂಟಿನಲ್ಲಿದ್ದ ಮೇಜರ್ ತಿವಾರಿ ಅವರು.

ಒಮ್ಮೆ ಧ್ಯಾನ್‍ಚಂದ್ ಅವರ ರೆಜಿಮೆಂಟಿನವರಿಗೂ ಸೈನ್ಯದ ಇನ್ನೊಂದು ರೆಜಿಮೆಂಟಿನವರಿಗೂ ಹಾಕಿ ಪಂದ್ಯ ನಡೆಯುತ್ತಿತ್ತು. ಎದುರಾಳಿಗಳು ಇವರಿಗಿಂತ ಎರಡು ಗೋಲುಗಳಿಂದ ಮುಂದಿದ್ದರು. ಪಂದ್ಯ ಮುಗಿಯಲು ಕೇವಲ ನಾಲ್ಕು ಮಿನಿಟುಗಳಿದ್ದಾಗ ಮೇಜರ್ ತಿವಾರಿಯವರು ಧ್ಯಾನ್‍ಚಂದ್‍ರನ್ನು ಕುರಿತು ಅಯ್ಯಾ ಯುವಕನೇ ಮುನ್ನುಗ್ಗು, ಏನಾದರೂ ಮಾಡಿ ಜಯ ಸಂಪಾದಿಸು ಎಂದು ಹುರಿದುಂಬಿಸಲಾಗಿ ಧ್ಯಾನ್‍ಚಂದ್ ಕೆರಳಿದ ಕೇಸರಿಯಂತೆ ಮುನ್ನುಗ್ಗಿ ನಾಲ್ಕು ಮಿನಿಟುಗಳಲ್ಲಿ ಮೂರು ಗೋಲುಗಳನ್ನು ಹೊಡೆದು ತಮ್ಮ ರೆಜಿಮೆಂಟಿಗೆ ಜಯ ತಂದುಕೊಟ್ಟರು. ಅಂದಿನಿಂದ ಹಾಕಿಯ ಇನ್ನೊಂದು ಹೆಸರು ಧ್ಯಾನ್‍ಚಂದ್ ಎಂಬಂತೆ ಇವರ ಕೀರ್ತಿ ದೇಶದಲ್ಲೆಲ್ಲ ಹರಡಿತು. ಭಾರತೀಯ ಸೈನ್ಯದಲ್ಲಿರುವ ಹಾಕಿ ಆಟಗಾರರು ನ್ಯೂಜಿûೀಲೆಂಡ್ ಪ್ರವಾಸ ಕೈಗೊಂಡಾಗ (1926) ಧ್ಯಾನ್‍ಚಂದರಿಗೆ ವಿದೇಶದಲ್ಲಿ ಹಾಕಿ ಆಡುವ ಅತ್ಯಂತ ಉಪಯುಕ್ತವಾದ ಅನುಭವ ದೊರೆಯಿತು. 1928ರಲ್ಲಿ ಅಮ್‍ಸ್ಟರಡ್ಯ್‍ಂನಲ್ಲಿ ನಡೆದ ಒಲಿಂಪಿಕ್ ಸ್ಪರ್ಧೆಯಲ್ಲಿ ಮೊದಲ ಬಾರಿ ಹಾಕಿಯಲ್ಲಿ ಸುವರ್ಣಪದಕ ಪಡೆದ ಭಾರತದ ಹಾಕಿತಂಡದಲ್ಲಿ ಧ್ಯಾನ್‍ಚಂದ್ ಇದ್ದರಲ್ಲದೆ ಆ ಯಶಸ್ಸಿಗೆ ಮುಖ್ಯ ಕಾರಣರೂ ಆಗಿದ್ದರು. ಲಾಸ್ ಆ್ಯಂಜಲಿಸ್‍ನಲ್ಲಿ ನಡೆದ ಒಲಿಂಪಿಕ್ ಸ್ಪರ್ಧೆಯಲ್ಲಿ ಭಾರತದ ಹಾಕಿ ಟೀಮು ಸುವರ್ಣ ಪದಕ ಗಳಿಸಿತಷ್ಟೇ. ಇಲ್ಲಿಯೂ ಧ್ಯಾನ್‍ಚಂದರ ಆಟ ಅತ್ಯಂತ ಆಕರ್ಷಕವಾಗಿತ್ತು.

1936ರಲ್ಲಿ ಬರ್ಲಿನ್‍ನಲ್ಲಿ ನಡೆದ ಒಲಿಂಪಿಕ್ ಪಂದ್ಯಗಳಲ್ಲಿ ಧ್ಯಾನ್‍ಚಂದ್ ಭಾರತದ ಹಾಕಿ ತಂಡದ ನಾಯಕರಾಗಿದ್ದುದಲ್ಲದೆ, ಸುವರ್ಣಪದಕ ಪಡೆದು ಭಾರತಕ್ಕೆ ಕೀರ್ತಿತಂದರು. 1956ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಭಾರತ ಸರ್ಕಾರ ಧ್ಯಾನ್‍ಚಂದ್‍ರನ್ನು ಗೌರವಿಸಿತು.

ಸಾಮಾನ್ಯ ಸೈನಿಕರಾಗಿ ಸೇನೆ ಸೇರಿದ ಧ್ಯಾನ್‍ಚಂದ್ 1942ರಲ್ಲಿ ಲೆಫ್ಟಿನೆಂಟರಾಗಿಯೂ 1947ರಲ್ಲಿ ಮೇಜರ್ ಆಗಿಯೂ ಸೇವೆ ಸಲ್ಲಿಸಿದರು. `ಹಾಕಿಯಲ್ಲಿ ನನ್ನ ಯಶಸ್ಸಿಗೆ ನನ್ನ ದೇಶಬಾಂಧವರು ನನ್ನ ಮೇಲಿಟ್ಟ ಪ್ರೀತಿ, ವಿಶ್ವಾಸಗಳೇ ಕಾರಣವೆಂದು ಧ್ಯಾನ್‍ಚಂದ್ ವಿನಮ್ರವಾಗಿ ಹೇಳುತ್ತಾರೆ. ಧ್ಯಾನ್‍ಚಂದ್ 1979ರಲ್ಲಿ ನಿಧನರಾದರು.															(ಎಸ್.ಎಚ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ